Saturday, June 21, 2014

ನೋಯಿಸದಿರು ಹೀಗೆ ಗಾಢ ಮೌನದಿ
ದೂಶಿಸದಿರು ಹೀಗೆ ಮಾತುಗಳ ಬಾಣದಿ
ಕನಸುಗಳು ಹೂತು ಹೋಗಲು ಸಲಾಕೆಯಾಗದಿರು
ಮಳೆಯಾಗಿ ಚಿಗುರೊಡೆಸುವೆ ಅವು ನನ್ನವು

ಬೆನ್ನಿಗಂಟಿದ ಕೊಳೆಯಾದರೆ ತೊಳೆದೇನು ನೀರ್ಹಾಕಿ
ಕೊಳೆಯಿಂದಲೇ ಕಟ್ಟದಿರು ಪ್ರೀತಿಯ ಕಟ್ಟಡವ
ದೊಪ್ಪನೆ ಕುಸಿದೀತು ಒಲವಿನ ಅಡಿಪಾಯವಿಲ್ಲದೆ
ಇನ್ನಾವ ಸಡಗರ ಅರಸಿಲ್ಲ ನಿನ್ನರಮನೆಯ ಹೊರತು

ನನ್ನ ದಾರಿ ಸಾಗುತಿದೆ ನಿನ್ನ ಕಂಗಳ ಬೆಳಕಲ್ಲಿ
ತಪ್ಪಿದ ದಾರಿಯೆಲ್ಲವೂ ಸೇರುತಿದೆ ಬಂದು ನಿನ್ನೆಡೆಗೆ
ಅಸಹಾಯಕತೆಯ ಸೂತಕದ ಛಾಯೆ ಮೂಡದಿರಲಿ
ಕತ್ತಲೆಯ ಕೂಪಕ್ಕೆ ನೂಕದಿರು,ಹಚ್ಚದಿರು ಮೇಲೊಂದು ಹಣತೆಯ 

ಅಗಲಿಕೆ

ನಿನ್ನ ಅಗಲಿಕೆಯ ನೋವು ಕಾಡುತಿದೆ
ನಿನ್ನ ನೆನಪುಗಳ ಬುತ್ತಿ ಬಿಚ್ಚುತಿದೆ
ಎಷ್ಟೆಂದು ಒಬ್ಬಳೇ ಉಣ್ನಲಿ
ಪಾಲು ನಿನಗೂ ಇದೆ,ಸುಖದಲ್ಲಿ ಮಾತ್ರವೇ?

ಕಂಗಳಲಿ ತುಂಬಿತ್ತು ಪ್ರೀತಿ
ಹೃದಯದಲಿ ಮಾಡಿತ್ತು ಭಾವದ ಮನೆ
ಒಳಗಿದ್ದ ಮಾತ್ರಕ್ಕೆ ಒಡೆಯ ನೀನಾದೆ
ಹೊರಹೋದೆ ಕಾರಣ ಹೇಳದೆ,ಏಕಾಂತ ನನಗೇಕೆ?

ಒಬ್ಬಂಟಿ ಬದುಕು ಅಸಾಧ್ಯದ ಕ್ರಿಯೆ
ಪ್ರತಿಕ್ರಿಯಿಸಲು ಮಾತು ಮೂಕವಾಗಿವೆ
ಸರಿದ ಸೂರ್ಯ ಬರುವ ನಾಳೆಯ ಉದಯಕ್ಕೆ
ನಿನ್ನ ಕಾಯುವ ನಾಳೆಗಳು ಸುಳ್ಳು, ಅದು ನಿಜವೇ?

Monday, September 16, 2013

ಮೊದಲ ದಿನ



ಹುಚ್ಚು ಭಾವನೆಗಳಿಗೆ ಕಿಚ್ಚು ಹಚ್ಚುವ ದಿನ
ನೂರು ಕಲ್ಪನೆಗಳನು ವಾಸ್ತೆವಕೆ ತರುವ ದಿನ

ಹೆಣ್ಣ ಮನದ ಬಯಕೆಗಳನು ತೆರೆಯುವ ದಿನ
ಹುಸಿ ನೋಟವ ಬೀರುತ ಮುಗುಳ್ನಗುವ ದಿನ

ಮೌನದ ಕಟ್ಟಳೆಯ ಮೀರಿ ಮಾತಾಡುವ ದಿನ
ಎಲ್ಲ ಬಂಧನಗಳ ತೊರೆದು ಬಿಡುವ ದಿನ

ನಲ್ಲನ ಸವಿ ನುಡಿಗಳ ಆಲಿಸುವ ದಿನ
ಕನ್ನೋಟಗಳ ಯುದ್ಧವ ನಡೆಸುವ ದಿನ

ಚಂದ್ರನ ಬಿಂಬವ ಸೂರ್ಯನ ಕಾಂತಿಯ ಒಟ್ಟಾಗಿಸುವ  ದಿನ
ಮೊದಲ ದಿನವಾಗಲಿ ನಮ್ಮಿಬ್ಬರಿಗೂ ಪ್ರತಿದಿನ

ಸಂಗಾತಿ





ನಿನ್ನ ಬಾಳ ಸಂಗಾತಿಯಾದೆನು ಇಂದು
ಮರೆತು ಹೋದೆನು ನಿನ್ನೆಯ ದಿನಗಳನ್ನು

ನಗುತ ನಲಿವ ನವ ಬಾಳಿನ ಹೊಸ ಹಾದಿಯಲಿ
ಜೊತೆ ಬಂದೆ ನೀನಿಂದು ನನ್ನೊಡಲ ಗುಡಿಸಲಿಗೆ

ಕಾಯುವೆ ನಿನ್ನ ಕಣ್ಣ ರೆಪ್ಪೆಯಂತೆ ಪ್ರತಿ ಕ್ಷಣವೂ
ಪ್ರೀತಿಸುವೆ ನಿನ್ನೆ ಎಲ್ಲದಕ್ಕೂ   ಮಿಗಿಲಾಗಿ 

ಪ್ರತಿ ಮಾತಾಡೆನು ನಿನ್ನ ಹಿತ ನುಡಿಗಳಿಗೆ
ಕೇಳುವ ತವಕ ನನ್ನಲ್ಲಿದೆ ಹುಸಿಯಾದರೂ ಸರಿಯೆ

ನಡೆಯುವೆ  ನೀನಿಟ್ಟ  ಹೆಜ್ಜೆಗಳ ಮೇಲೆ ಇಟ್ಟು ನಾ ಪ್ರತಿ ಹೆಜ್ಜೆ 
ಸೋಕುವ ಮಣ್ಣ ಮೆದುವಲಿ  ನಿನ್ನ  ಸ್ಪರ್ಶವೇ ಇರಲಿ

ಗಗನ ಚುಂಬಿಸುವ ಆರ್ಭಟ ನಿನ್ನ ನಗುವು
ಹಿತವಾದ ಮೃದಂಗ ಮೀಟಿದ ಅನುಭವ

ಸೋಲೇ ಇರಲಿ ಗೆಲುವೆ ಬರಲಿ, ನೋವೆ ಇರಲಿ ನಲಿವೆ ಬರಲಿ
ಕಳೆಯುವೆನು ಸಾವಿರ ಯುಗಗಳನು ನಿನ್ನೊಂದಿಗೆ ಹೀಗೆ

Thursday, April 25, 2013







ಇಂದು

ನೀ ನನ್ನ

ಅಗಲಿ ಹೋದರೂ..

ನಿನ್ನ

ನೆನಪುಗಳಿಂದ

ಮಾಸಿ ಹೋದರೂ..

ಎಂದಾದರೂ

ನಾ ನಿನ್ನ

ನೆನಪುಗಳಲ್ಲಿ

ಮೂಡಿದರೆ

ಹುಡುಕದಿರು ನೀನನ್ನ..

ಮತ್ತೆಲ್ಲಿಯೂ..

ನಾನಿನ್ನ

ಕಣ್ಣಲ್ಲೇ ಇರುವೆ;

ಒಂದು ಹನಿ ಕಣ್ಣೀರಾಗಿ…!

Tuesday, April 23, 2013




ನಿನ್ನ ಕೋಮಲವಾದ ವದನದಲ್ಲಿ, ಕಾಡುತಿರುವ ಕಂಗಳಲಿ,

ಕಿರುನಗುವ ಅಂದ ಅದರದಲಿ, ನಾನಿರುವೆ ನಿನ್ನಲ್ಲಿ.

ಬಳ್ಳಿ ಅಪ್ಪಿದ ಮರದಲಿ, ಬಿಳಿ ಹೂಗಳ ಕಂಪಲಿ,

ಬೆಳ್ಳಕ್ಕಿಗಳ ಇಂಪಲಿ, ಹಸಿರು ಹಾಸಿಗೆಯ ಚೆಲ್ಲಿ.

ನಾ ಕಂಡೆ ನಿನ್ನ ಆ ಲತೆಗಳಲಿ.

ಮಾತಲಿ ಹೇಳಲಾಗದು, ಕತೆಯಲಿ ಬರೆಯಲಾಗದು,

ಈ ಪ್ರೀತಿಯಾ ಹೇಳದೆ ಇರಲಾಗದು, ಹೇಳಲು ಮಾತಲಿ ಬಲ ಬಾರದು,

ನೀನೆ ಹೇಳು ಏನು ಮಾಡುವುದು?

ನಿನ್ನ ಪ್ರೀತಿಯ ಅಮಲಲ್ಲಿ ನಾನಿರುವೆ,

ಹಗಲು ಇರುಳು ನಿನಗಾಗಿ ಕಾದಿರುವೆ

ಕೆಲಸ ಕಾರ್ಯವೆಲ್ಲ ಬದಿಗಿಟ್ಟುರುವೆ

ನೀನೆಂದು ನನಗಾಗಿ ಬರುವೆ?

ಸದಾಕಾಲ ಬೆಳಗುತ್ತಿರಲಿ ನಮ್ಮ ಪ್ರೀತಿಯ ಹಣತೆ,

ನನ್ನ ಮನ ಬಯಸುತ್ತಿದೆ ನಿನ್ನ ಮಮತೆ,

ನಾ ಸೂರ್ಯನನು ಹುಡುಕುವ ಸೂರ್ಯಕಾಂತಿಯಂತೆ

ನಿನಗೆ ಅರ್ಪಣೆ ಈ ಹೃದಯ ಗೀತೆ...

Friday, November 30, 2012


ಹುಚ್ಚು ಮನಸ್ಸಿದು ಬೆಚ್ಚನೆಯ ತೋಳನು ಬಯಸುತಿದೆ 
ಪ್ರತಿ ನಿಮಿಷ ನಿನ್ನ ಕಂಡ ಅನುಭವವ ಸವಿಯುತಿದೆ 
ಕಣ್ಣ ಮಿಟುಕಿಸಲೇ ಮೊಗವ ಮುಚ್ಚಿಕೊಳ್ಳಲೇ ಏನೊಂದೂ ಅರಿಯದಾಗಿದೆ 
ಹೀಗೇಕೆ ನನ್ನಲಿ ನಲುಮೆಯ ಚಿಲುಮೆಯ ನವೀನ ಭಾವ ಮೂಡುತಿದೆ 

ಕಾತುರದ ಕ್ಷಣಗಣನೆ ಸ್ಥಗಿತವಾಗಿದೆ ನೆನಪಿನ ಅಲೆಗಳಲ್ಲಿ ತೊಯ್ದು 
ಹೊಸ ಬದುಕಿನ ಮುನ್ನುಡಿಯ ಬರೆಯಲು ಹೊರಟಿರುವೆ ಈ ದಿನದಂದು 
ವಿಸ್ಮಯವೀ ಬದುಕು ಬಲು ಮೋಹಕ ಬಲು ನಾಜೂಕು ಎನಿಸಿದೆ ಇಂದು 
ತಿಂಗಳ ಬೆಳದಿಂಗಳು ಚೆಲ್ಲಿದೆ ಅಂಗಳದಿ ಹೊಳಪು ಹೆಚ್ಚಿದೆ ಹೇಳಲಿ ಹೇಗೆಂದು 

ಬಯಕೆಗಳ ಸುಳಿಯಲ್ಲಿ ಸಿಲುಕಿಸಿರುವೆ ನನ್ನ ಹೊರಗೆ ಬರಲಾರೆ ನಾನಿನ್ನು 
ಮರೆತೆನೆಂದರೂ ಮರೆಯಲಾರೆ ಬರುವೆ ಕೋಲ್ಮಿಂಚಿನಂತೆ ಕಣ್ಣ ಮುಂದೆ ನೀನು 
ನೋವು ಮರುಕಳಿಸಿದರೂ ಚಿಂತೆ ಇಲ್ಲ ಚಿತೆ ಮುಂದಿದ್ದರೂ ಭಯವಿಲ್ಲ 
ತೇಲುವ ಆಗಸವಾಗಿ ಬಾ ಮುಸ್ಸಂಜೆಯ ಬೆಳಕಾಗಿ ಬಾ ಹೃದಯಕ್ಕೆ ಬೇಲಿಯೇ ಇಲ್ಲ 

Tuesday, November 13, 2012


ಗೆಳೆಯ ನಿನ್ನ ನಗುವಿಂದ ನನ್ನ ಕಣ್ಣ ಹೊಳಪಿದು ಹೆಚ್ಚುತಿದೆ 
ನಿನ್ನ ಇರಿವ ನೋಟದಿಂದ ಬಯಕೆಗಳು ಹುಚ್ಚಾಗುತಿವೆ 
ಇರಲಿ ಅನುಭವ ಸಿಹಿಯಾಗಿದೆ ಏಕೋ ಹೇಳಲು ಮುಜುಗರ 
ಎದೆಗಾರಿಕೆಗೆ ಸಾಕ್ಷಿಯಾಗಿ ಕೊಡಬಲ್ಲೆ ನಾ ಪ್ರತ್ಯುತ್ತರ 

ಕಾಯುವ ಕಣ್ಣು ಕೊಲ್ಲುತಿದೆ ಹೀಗೆ ನಿರರ್ಗಳವಾಗಿ 
ಸೋಲುತಿದೆ ಮನಸ್ಸು ಹೀಗೇಕೋ ಸರಾಗವಾಗಿ 
ಸನ್ನೆ ಮಾಡಿದೆ ನನ್ನ ಕರೆದಿದೆ ಹೀಗೆ  ಸೆರೆ ಹಿಡಿಯಲು 
ಜಾರಿದ ಕ್ಷಣದಲಿ ನಿನ್ನ ಎದೆಯಲಿ ಮನೆಯ ಮಾಡಲು 

ಬಂಧಿಯಾಗುವೆ ನೀಡುವೆಯಾ ಆಸರೆ ಹೃದಯದಲಿ 
ಹೇಳದೆ ಇರುವ ಮಾತನು ಬಚ್ಚಿಡುವೆ ನಾನದರಲಿ  
ಮೌನವು ಎದೆಯಲಿ ನೂಕಿದೆ ನನ್ನ ನಿನ್ನ ಕಡೆಗೆ 
ಸೋತರೂ ಕೇಳುತಿದೆ ಕಾರಣವ ಒಲವೆಂಬ ಬಗೆ 

ನಿನ್ನೆದೆಯ ಸಿಂಹಾಸನದಿ ಮೆರೆಯುವ ಬಯಕೆ ಹುಟ್ಟಿದೆ
ಸಾಮ್ರಾಜ್ಯದ ಒಡೆತನವ ವಶಪಡಿಸಿಕೊಲ್ಲಲೇ ಇಂದೇ
ಮುಕ್ತನಾಗು ಸಾಕಿನ್ನು ಬೇಡ  ಭವನೆಗಳು ನಿನಗೆ
ಪ್ರೀತಿಸು ನನ್ನನು ಹೋಗುವ ಶಾಶ್ವತವಾಗಿ ದೂರದ ತೀರಕೆ 

Sunday, September 9, 2012

ಮೌನದ ಬದುಕು



ಬದುಕಲಿ ಹೇಗೆ ನಾ ನಿನ್ನ ಮರೆತು
ಜೀವನ ಕಂಡಿದೆ ಬಹು ದೊಡ್ಡ ಶೂನ್ಯದಂತೆ

ಸಾಗಲಿ ಹೇಗೆ ನಾ ನಿನ್ನ ಬಿಟ್ಟು
ಹೆಜ್ಜೆಗಳು ಭಾರವಾಗಿ ಚಲನೆ ಮರೆತಂತೆ

ಕಣ್ಣೋಟದಿ ಕಾಣುವ ಪ್ರತಿ ಜೀವ ನೀನಾಗಿ
ಕಣ್ಣು ತೆರೆದರೂ ಪ್ರಪಂಚ ಕಾಣದ ಕುರುಡಿಯಂತೆ

ಈ ಹೀನಾಯ ಶಿಕ್ಷೆ ನೀಡಿದೆ ಏಕೆ ನನಗೆ
ಅಪರಾಧಿ ನಾನಲ್ಲ ಆದರೂ ಅಪರಾಧಕ್ಕೆ ಬಲಿಯಾದಂತೆ

ಸೋಲು ಕಂಡ ಹೃದಯಕೆ ಗೆಲುವಿನ ದಾರಿ ಗೊತ್ತಿಲ್ಲ
ಗುರಿ ಮರೆತು ಸಾಗುತಿದೆ ಅಲೆಮಾರಿಯಂತೆ

ಸತ್ತ ಜೀವವ ಮತ್ತೊಮ್ಮೆ ಕೊಲ್ಲುವ ಆಸೆ ಏಕೆ
ಕೊನೆ ಉಸಿರಲೂ ಕೂಗುವ ದನಿ ನಿನ್ನ ಹೆಸರಂತೆ

ಮೌನದ ಬದುಕು ಸಾಕಿನ್ನು ಗೆಳೆಯ ಹೆಚ್ಚೇನು ಹೇಳಲಿ
ಮುಗ್ಧ ಭಾವದಿ ಸುರಿಸುತಿವೆ ಕಂಗಳು ಸಂಜೆಯ ಮಳೆಯಂತೆ 

ನಿನ್ನ ನೆನಪಿನ ಮಳೆಯಲಿ



ಯಾರ ನೋವಿಗೆ ಯಾರು ಹೊಣೆಯೋ
ಯಾರ ಭಾವನೆಗೆ ಯಾರ ಸ್ಪಂದನೆಯೋ
ಹುಚ್ಚು ಮನಸ್ಸಿನ ನೂರು ಕಲ್ಪನೆಯೋ
ಅರಿಯದೆ ಹುಟ್ಟಿತು ಪ್ರೀತಿಯೊಂದು ಮಾಯೆಯೋ

ನನ್ನ ಭಾವನೆಗೆ ಜವಾಬ್ದಾರಳು ನಾನಲ್ಲ
ಮುಂದರಿಯದೆ ತಪ್ಪು ಮಾಡಿದೆ ಅದು ನನ್ನದಲ್ಲ
ಯಾಕೆಂಬ ಪ್ರಶ್ನೆ ಕಾಡುತಿದೆ ಬಹು ದಿನಗಳಿಂದ
ಉತ್ತರಿಸಲು ಉಸಿರಿಲ್ಲ ಹೊರಡದು ಸ್ವರ ನನ್ನಿಂದ

ಪ್ರೀತಿ ಕುರುಡು ಅನ್ನೋ ಮಾತು ನಿಜವಾಯಿತು
ನೋವು ಶಾಶ್ವತ ಅನ್ನೋ ನುಡಿ ಸಹಜವಾಯಿತು
ಉಕ್ಕಿ ಬರುವ ದುಃಖಕೆ ತಡೆಯೊಂದು ತರದೆ ಹೋದೆ
ಕಣ್ಣಿಂದ ಉದುರುವ ಮುತ್ತುಗಳ ಬೆಲೆ ಕಟ್ಟಲಾದೆ

ಬೇಯುವ ಬಯಕೆಗಳಿಗೆ ತಣ್ಣೀರು ಎರೆಚಿ ಹೋದೆ ನೀನು
            ಜೀವನವಿಡೀ ನಿನ್ನ ನೆನಪಿನ ಮಳೆಯಲಿ ತೋಯುವೆ ನಾನು