Sunday, September 9, 2012

ಮೌನದ ಬದುಕು



ಬದುಕಲಿ ಹೇಗೆ ನಾ ನಿನ್ನ ಮರೆತು
ಜೀವನ ಕಂಡಿದೆ ಬಹು ದೊಡ್ಡ ಶೂನ್ಯದಂತೆ

ಸಾಗಲಿ ಹೇಗೆ ನಾ ನಿನ್ನ ಬಿಟ್ಟು
ಹೆಜ್ಜೆಗಳು ಭಾರವಾಗಿ ಚಲನೆ ಮರೆತಂತೆ

ಕಣ್ಣೋಟದಿ ಕಾಣುವ ಪ್ರತಿ ಜೀವ ನೀನಾಗಿ
ಕಣ್ಣು ತೆರೆದರೂ ಪ್ರಪಂಚ ಕಾಣದ ಕುರುಡಿಯಂತೆ

ಈ ಹೀನಾಯ ಶಿಕ್ಷೆ ನೀಡಿದೆ ಏಕೆ ನನಗೆ
ಅಪರಾಧಿ ನಾನಲ್ಲ ಆದರೂ ಅಪರಾಧಕ್ಕೆ ಬಲಿಯಾದಂತೆ

ಸೋಲು ಕಂಡ ಹೃದಯಕೆ ಗೆಲುವಿನ ದಾರಿ ಗೊತ್ತಿಲ್ಲ
ಗುರಿ ಮರೆತು ಸಾಗುತಿದೆ ಅಲೆಮಾರಿಯಂತೆ

ಸತ್ತ ಜೀವವ ಮತ್ತೊಮ್ಮೆ ಕೊಲ್ಲುವ ಆಸೆ ಏಕೆ
ಕೊನೆ ಉಸಿರಲೂ ಕೂಗುವ ದನಿ ನಿನ್ನ ಹೆಸರಂತೆ

ಮೌನದ ಬದುಕು ಸಾಕಿನ್ನು ಗೆಳೆಯ ಹೆಚ್ಚೇನು ಹೇಳಲಿ
ಮುಗ್ಧ ಭಾವದಿ ಸುರಿಸುತಿವೆ ಕಂಗಳು ಸಂಜೆಯ ಮಳೆಯಂತೆ 

ನಿನ್ನ ನೆನಪಿನ ಮಳೆಯಲಿ



ಯಾರ ನೋವಿಗೆ ಯಾರು ಹೊಣೆಯೋ
ಯಾರ ಭಾವನೆಗೆ ಯಾರ ಸ್ಪಂದನೆಯೋ
ಹುಚ್ಚು ಮನಸ್ಸಿನ ನೂರು ಕಲ್ಪನೆಯೋ
ಅರಿಯದೆ ಹುಟ್ಟಿತು ಪ್ರೀತಿಯೊಂದು ಮಾಯೆಯೋ

ನನ್ನ ಭಾವನೆಗೆ ಜವಾಬ್ದಾರಳು ನಾನಲ್ಲ
ಮುಂದರಿಯದೆ ತಪ್ಪು ಮಾಡಿದೆ ಅದು ನನ್ನದಲ್ಲ
ಯಾಕೆಂಬ ಪ್ರಶ್ನೆ ಕಾಡುತಿದೆ ಬಹು ದಿನಗಳಿಂದ
ಉತ್ತರಿಸಲು ಉಸಿರಿಲ್ಲ ಹೊರಡದು ಸ್ವರ ನನ್ನಿಂದ

ಪ್ರೀತಿ ಕುರುಡು ಅನ್ನೋ ಮಾತು ನಿಜವಾಯಿತು
ನೋವು ಶಾಶ್ವತ ಅನ್ನೋ ನುಡಿ ಸಹಜವಾಯಿತು
ಉಕ್ಕಿ ಬರುವ ದುಃಖಕೆ ತಡೆಯೊಂದು ತರದೆ ಹೋದೆ
ಕಣ್ಣಿಂದ ಉದುರುವ ಮುತ್ತುಗಳ ಬೆಲೆ ಕಟ್ಟಲಾದೆ

ಬೇಯುವ ಬಯಕೆಗಳಿಗೆ ತಣ್ಣೀರು ಎರೆಚಿ ಹೋದೆ ನೀನು
            ಜೀವನವಿಡೀ ನಿನ್ನ ನೆನಪಿನ ಮಳೆಯಲಿ ತೋಯುವೆ ನಾನು           
 

ನೆನಪು





ಕಾಡುತಿದೆ ನಿನ್ನ ನೆನಪು ನನಗೆ
ಯಾರಿಗೆ ಹೇಳಲಿ ಈ ನನ್ನ ಬೇಯ್ಗೆ

ನೆನೆಪಿದೆಯಾ ಗೆಳೆಯ ಜೊತೆ ನಡೆದ ದಾರಿ
ಮನದ ದುಗುಡ ಹೋಗಿದ್ದು ಹಾರಿ

ಮುಸ್ಸಂಜೆ ಬೆಳಕಲ್ಲಿ ನೀ ಚೆಲ್ಲಿದ ಆ ನಗೆಯ ಬಗೆ
ಕಲುಕಿತ್ತು ಮನ  ಮತ್ತೆ ನೋಡಲು ನಿನ್ನ ನಗೆ

ಕೈಯಲ್ಲಿ ಕೈಯಿಟ್ಟು ಸಾಗಿದ ಆ ವೇಳೆ
ಮನದಿ ಮುಗಿಲಲ್ಲಿ ಮೊಳಗಿತ್ತು ಕಹಳೆ

ದಾರಿಹೋಕರಿಗೆ ಅನುಕಿಸಿದ ನಿನ್ನ ರೀತಿ
ಮಾಡಿತ್ತು ಹಿಂದೊಮ್ಮೆ ಬಹು ದೊಡ್ಡ ಪಜೀತಿ

ಮಳೆಗೆ ಹೆದರಿ ಓಡಾಡಿದ ಆ ಜಾಗ
ಕೈ ಚಾಚಿ ಕರೆದಿದೆ  ಎನ್ನ ತೆರೆದು ಬೀಗ

ಕಾಲು ಜಾರಿ ಬಿದ್ದಾಗ ಮೂಡಿದ ಆ ಕಣ್ಣ ಹನಿ
ನೆಲ ಸೋಕುವ ಮುನ್ನ ಸಂತೈಸಿದ ನಿನ್ನ ದನಿ

ನೆನಪಾಗದೆ ಇರದು ನಿನ್ನ ಒಡನಾಟದ ದಿನಗಳು
ಮರುಕಳಿಸಿವೆ ಇಂದು ಮಧುರ ನೆನಪಿನ ಕ್ಷಣಗಳು

ರಾಜ ಕುಮಾರ


ನನ್ನ ಕನಸಲಿ ಬಂದ ಮಗಧೀರ
ಪ್ರೇಮ ಸಾಮ್ರಾಜ್ಯದ ಮಹಾ ಶೂರ

ನಾನೊಮ್ಮೆ ಸೆರೆಬಿದ್ದೆ ಸಣ್ಣ ತಪ್ಪಿಗಾಗಿ
ತನ್ನ ಪ್ರಾಣವೇ ತೆತ್ತ ಈ ಪ್ರೇಯಸಿಗಾಗಿ

ಶೂರನ ಧೀರ ನದಿಗೆ ಕಲ್ಲು ಗುಂಡಿಗೆ
ಸೋಲದೆ ಇರಲಿಲ್ಲ ಮನೆವೆಂಬ ಮಲ್ಲಿಗೆ

ಹುಚ್ಚು ಮನಸ್ಸು ಹರಿಯಿತು ಎಲ್ಲೆ ಇರದೇ
ಅವನಿಗಾಗಿ ಹಂಬಲಿಸಿತು ಸಮಯದ ಪರಿವಿಲ್ಲದೆ

ಕೊನೆ ಮೀರಿ ಸಾಗಿತು ಮನ ದಡ ಕಾಣದೆ
ಚಡಪಡಿಸಿ ಬೇಡಿತು ಹೃದಯ ಅವನ ಕಣ್ಮುಂದೆ

ಸಾವಿರ ಜನರಲ್ಲಿ ಎದ್ದು ಕಾಣುವ ಸರದಾರ
ಹೂಡಿ ಬಿಟ್ಟ ತನ್ನ ಪ್ರೇಮದ ಬಿಡಾರ

ಲೋಕದ ಕಣ್ಣಿಗೆ ನನ್ನ ಪ್ರೀತಿ ಮುಳ್ಳಾಯಿತೆ
ಅವರ ಮಾತಿಗೆ ನಿನ್ನ ಹೃದಯ ಕಲ್ಲಾಯಿತೆ

ತೊರೆದು ಹೋದೆಯಾ  ಕೊನೆಗೂ ಪ್ರೇಮ ರಾಜ್ಯಭಾರ
ಜೀವಂತ ಶವವಾದರೂ ನನ್ನ ಪ್ರೀತಿ ಅಜರಾಮರ

ಕೆತ್ತಲೇ ನಿನ್ನ ಹೆಸರ ಆ ಕಲ್ಲಿನಲ್ಲಿ
ನೀನೆ ಕಾಣುವೆ ಕಲ್ಲಲಿ ನಾ ಹೇಗೆ ಕೆತ್ತಲೀ

ಬಿತ್ತಲೇ ಬೀಜ ನೀ ಮಡಿದ ಜಾಗದಲಿ
ನಿನ್ನ ದೇಹವೇ ಚಾಚಿಕೊಂಡ ಹಾಗಿದೆ ಈ ನೆಲದಲಿ

ಹೇಗೆ ಮರೆಯಲಿ ನೀ ಬಿಟ್ಟ ಬಾಣವ
ಚುಚ್ಚಿ ಅನುಕಿಸಿದೆ ನನ್ನಿಂದ ನೀ ಪಡೆದ ಮರಣವ

ಬೇಡ ಗೆಳೆಯ ನೀನಿನಲ್ಲದ ಲೋಕ ನನಗೆ
ತೋರಲಾರೆನು ಹುಸಿನಗೆಯ ಈ ಬಗೆ

ಪ್ರೇಮ ಬಂಧನದ ಸಲಾಕೆಯ ತೊರೆದಿರುವೆ ಇಂದು
ನಿನ್ನ ಪ್ರೀತಿಯ ಕಾವಲು ನನಗೆ ಎಂದೆಂದು

ಧೀರನಂತೆ ಮೆರೆದ ನಾಲ್ಕು ದಿನ ಸಾಕು ಗೆಳೆಯ
ದಿನ ಕಳೆಯಲು ಆ ನೆನಪು ಬೇಕೆನಗೆ ಒಡೆಯ

ಖಡ್ಗ ಕಯ್ಯಲಿ ರೋಷ ಮೊಗದಲಿ ಕಹಳೆ ಮೊಳಗಲಿ
ಹುಟ್ಟಿ ಬಾರೋ ಧೀರ ಮತ್ತೊಮ್ಮೆ ಆ ಪೂರ್ವದಲಿ