ಮೌನದ ಸಂಭಾಷಣೆ ಅರಿಯದ ಭಾವ,ಭಾವದ ಬೆಸುಗೆಯ ಬೆಸೆಯಿತು ಜೀವ
ನಿನ್ನ ಪ್ರೀತಿಯ ಬಯಲಲ್ಲಿ ಮಾಡಿತ್ತು ಮನೆಯೊಂದ,ಬೀಗವಿಲ್ಲದ ಬಾಗಿಲೊಂದ
ಅನುದಿನ ಸಂತಸದ ತೋರಣ ನಲಿಯುತಿತ್ತು,ನಿನ್ನ ಆಗಮನದ ಸಂದೇಶದಿಂದ
ಮುಂಜಾವಿನ ಸೂರ್ಯನ ಹೊಂಬನ್ನವ ಸೂಸಿತ್ತು ಮನೆಯ ಆವರಣದ ತುಂಬ
ಹಕ್ಕಿಗಳ ಕಲರವ ನೀಡುತ್ತಿತ್ತು ಮನದಿ ಆಹ್ಲಾದ,ಇಂಪಾದ ಸಂಗೀತ
ಹಚ್ಚ ಹಸುರು ಹಾಸಿತ್ತು ಹಾಸಿಗೆಯಾ ಅಂಗಳದಿ,ಅವನ ಬರುವಿಕೆಗೆಂದು
ಇಬ್ಬನಿಯ ಸಾಲುಗಳು ಕಾಯುತಿವೆ ನನ್ನ ಗೆಳೆಯನ ಸ್ಪರ್ಶಕೆ,ಅವನ ನೋಟಕೆ
ಪ್ರಕೃತಿಯೇ ಸಜ್ಜಾಗಿದೆ, ಹೆಮ್ಮೆಯಿಂದ ಬೀಗುತಿದೆ,ಅದರ ಸರಿಸಾಟಿ ಯಾರೆಂದು
ಏನೋ ಕಳವಳ ಯಾಕೋ ತಳಮಳ ಪ್ರೀತಿಯೇ ನಿನ್ನ ಮಹಿಮೆ ಹೀಗೇನಾ
ನಡೆದರೂ ದೂರಕೆ ಮುಗಿಯುತಿಲ್ಲ ದಾರಿ, ಕಾಣುತ್ತಿಲ್ಲ ಕೊನೆ,ಬ್ರಮೆ ಅದೇನಾ
ಕಣ್ಮುಚ್ಚಿ ಕುಳಿತಿರುವೆ ಬಾ ಬೇಗನೆ,ಕಣ್ತೆರೆದರೆ ಕಾಣುವ ಮೊದಲ ಜೀವ ನೀನಾಗು
ಕಾಯುತಿರುವೆ ಬಾ ಸರಸರನೆ, ಕಾಯುವ ಅರ್ಥವ ತಿಳಿಯುವ ಆಸೆ ನನಗೆ
ಮನದಿ ಮೂಡಿದ ಕಲ್ಪನೆಯ ರಾಶಿಗೆ ಜೀವ ತುಂಬುವ ಧೀರ ನೀನಾಗು
ಪ್ರೀತಿಯಲ್ಲಿ ಸಾಮಾನ್ಯವಾಗಿ ಇರುವ ಆ 'ವೇದನೆ'ಯು ಮನಸ್ಸನ್ನು ಸ್ಪರ್ಶಿಸುವಂತೆ ಹೊರಹೊಮ್ಮಿದೆ ನಿಮ್ಮ ಕವನದಲ್ಲಿ. ಉತ್ತಮ ಬರೆಹ :o)
ReplyDelete